ಹೋಮ್ ವರ್ಕ್

ಮೊನ್ನೆ ಚಿಕ್ಕವಳಿಗೆ ಹೋಮ್ ವರ್ಕ್ ಮಾಡಿಸ್ತಿದ್ದೆ. ತಿದ್ದೋ ಕೆಲಸ. ನಮ್ಮವಳು ಚುಕ್ಕೆ ಮೇಲೆ ತಿದ್ದೋದೇನೋ ಚೆನ್ನಾಗೇ ತಿದ್ತಾಳೆ. ಆದ್ರೆ, ಕೆಳಗೆ ಬರೀಬೇಕಾದ್ರೆ, ಸ್ವಲ್ಪ ಜಾಸ್ತೀನೇ ದೊಡ್ಡದಾಗಿ, ಜಾಸ್ತೀನೇ ಜಾಗ ಬಿಟ್ಟು ಬರೀತಾಳೆ. ಹಾಗಾಗಿ ಲೈನಿನ ಕೊನೆಗೆ ಯಾವಾಗ್ಲೂ ಸಂಧಿಗ್ಧ ಪರಿಸ್ಥಿತಿ.

ನಾನು, “ಇನ್ನೂ ಚಿಕ್ಕದಾಗಿರ್ಲಿ”, “ಇನ್ನೂ ಹತ್ತಿರ ಇರ್ಲಿ”, “ಅಷ್ಟು ಒತ್ತಿ ಬರೀಬೇಡ”, ಅಂತ ಜುಗ್ಗತನ ಮಾಡ್ತಾ ಇದ್ದೆ. ಅವಳು ಅಷ್ಟು-ಇಷ್ಟು ಸ್ಪಂದಿಸ್ತಾ ಇದ್ಳು.

ಟೇಬಲ್ ಮೇಲೆ ಪುಸ್ತಕ, ಕುರ್ಚಿ ಮೇಲೆ ಅವಳು, ಅವಳ ನೈರುತ್ಯದಲ್ಲಿ ನಾನು ಇನ್ನೊಂದ್ ಕುರ್ಚಿ ಮೇಲೆ. ತಿದ್ದೋಕೆ ಒಂದು ದೊಡ್ಡ ಪದದ ಆಗಮನ. ನಾಲ್ಕು ಬಾರಿ ಒಂದೇ ಲೈನಿನಲ್ಲಿ ಬರಿಬೇಕು. ಅವಳು ಚುಕ್ಕೆ ಮೇಲೆ ತಿದ್ದಬೇಕಾದ್ರೇನೆ, ನಾನು ಮುಂದಿನ ಲೈನಿನ ಬಗ್ಗೆ ಮುಂದಾಲೋಚನೆಯಲ್ಲಿ ಮಗ್ನ. ಮುಂದಿನ ಲೈನಿಗೆ ಪೆನ್ಸಿಲ್ಲು ಬಂತು. ಮೊದಲನೇ ಅಕ್ಷರ ತನ್ನ ವಿರಾಟರೂಪ ಪಡಿಯಿತು. ನಾನು “ಇನ್ನೂ ಚಿಕ್ಕದಾಗಿ ಚಿನ್ನ” ಅಂತ ಅಳಿಸಿ ಮತ್ತೆ ಬರಿಸಿದೆ. ಮೂರನೇ ಸಲಕ್ಕೆ ಅದರ ಗಾತ್ರ ಕಂಟ್ರೋಲಿಗೆ ಬಂತು. ಈಗ ಮುಂದಿನ ಅಕ್ಷರದ ಸರದಿ.

ಮೊದಲ ಅಕ್ಷರದಿಂದ ಒಂದು ಮೈಲಿ ದೂರದಲ್ಲಿ ಪೆನ್ಸಿಲ್ ಇಟ್ಲು. ನಾನು ಅದನ್ನ ಅಳಿಸಿ, “ಇನ್ನೂ ಹತ್ತಿರಾನಮ್ಮ” ಅಂದೆ. ಅವಳು ನನ್ನ ನೋಡಿ ಪೆನ್ಸಿಲ್ಲನ್ನ ಪೇಪರ್ ಮೇಲೆ ಇಟ್ಲು. ಮತ್ತೆ ಅಷ್ಟೇ ದೂರದಲ್ಲಿ ಪೆನ್ಸಿಲ್ಲು. ನಾನು ಮತ್ತೆ ಅಳಿಸಿ “ಇನ್ನೂ ಹತ್ತಿರ ಬಾ” ಅಂದೆ. ಅವಳು ಮತ್ತೆ ಅಲ್ಲೇ ಪೆನ್ಸಿಲ್ ಇಟ್ಟಳು. ನಾನು “ಏಯ್! ಇನ್ನೂ ಹತ್ತಿರ” ಅಂತ ಗದರಿದೆ. ಅವಳ ಮೊಂಡು ಮೂಗಿನ ಮೇಲೆ ಇಷ್ಟು ಹೊತ್ತು ಕೋಪ ನಿಂತಿದ್ದೇ ದೊಡ್ಡ ವಿಷಯ. ತಲೇ ಎತ್ತಿ ನನ್ನ ದುರುಗುಟ್ಟಿ ನೋಡಿದಳು. “ಅಪ್ಪಾ! ಇನ್ನೂ ಎಷ್ಟು ಹತ್ರ? ಇನ್ನೂ ಹತ್ರ ಅಂತ ಹೇಳಿದ್ರೆ, ನಾನು ಕೆಳಗೆ ಬಿದ್ದೋಗ್ತೀನಿ ಅಷ್ಟೇ” ಅಂತ ಚೇರನ್ನು ತೋರಿಸ್ತಾ ಹೇಳುದ್ಲು. ನಾನು ನೋಡ್ತೀನಿ, ಅವಳು “ಹತ್ತಿರ ಹತ್ತಿರ” ಅಂತ ನಾನು ಹೇಳ್ತಿದ್ದ ಹಾಗೆಲ್ಲಾ ಚೇರಿನಲ್ಲಿ ಸ್ವಲ್ಪ ಸ್ವಲ್ಪಾನೇ “ನನ್ನ ಹತ್ತಿರಕ್ಕೆ” ಸರಿದುಕೊಳ್ತಾ ಚೇರಿನ ತುದೀಗೆ ಬಂದು ಕೂತಿದ್ದಳು.

ನಾನು ಅದನ್ನ ನೋಡಿ ನಕ್ಕೆ. ನಾನು “ಹತ್ತಿರ” ಅಂತ ಹೇಳಿದರ ಅರ್ಥ ಏನು ಅಂತ ತೋರಿಸಿ ಹೇಳಿದೆ. ಅದಾದ ಮೇಲೆ ಅಕ್ಷರಗಳು ಅಷ್ಟೇನೂ ಹತ್ತಿರ ಆಗದೇ ಇದ್ರೂ, ಆ ಕ್ಷಣಗಳು – ನಿಮಿಷಗಳು ಹತ್ತಿರ-ಹತ್ತಿರ ಜೋಡಿಸಿಟ್ಟ ಮುತ್ತಿನ ಮಣಿಗಳ ಮುತ್ತಿನ ಹಾರದಷ್ಟೇ ಸುಂದರವಾಗಿ ನನ್ನ ಮನಸ್ಸನ್ನು ಅಲಂಕರಿಸಿತು.

ಹಲಸಿನಹಣ್ಣು

ಬೆಂಗಳೂರಿನಲ್ಲಿ ಹೀಗೊಂದು ಆನಂದನಗರ. ಅಲ್ಲೊಂದು ಸುಂದರ ಬೀದಿ. ಕೆಲಸ ಮುಗಿಸಿ ಆಫೀಸಿನಿಂದ ಎರಡು ಘಂಟೆ ಬಸ್ಸಿನಲ್ಲಿ ಬಸವಳಿದ ಪ್ರಯಾಣದ ನಂತರ, ಈ ಬೀದಿಯಲ್ಲಿ ನಡೆದು ಮನೆ ತಲುಪುವುದು ನನ್ನ ವಾಡಿಕೆ. ಮನೆ ತಲುಪುವ ಮುನ್ನ ಕೆಲಸದ ಹಾಗು ಟ್ರಾಫಿಕ್ಕಿನ ಜಂಜಾಟದ ಮನಸ್ಥಿತಿಯಿಂದ ಸುಪ್ತ ಮನಸ್ಥಿತಿಗೆ ಮರಳಲು ಇದು ಸ್ವಲ್ಪ ಮಟ್ಟಿಗೆ ನನಗೆ ಸಹಾಯಕ.

ಬೀದಿಯ ಒಂದು ಬದಿಯಲ್ಲಿ ದೊಡ್ಡ ಅರಳಿ ಮರ, ಅದರ ಅಡಿಯಲ್ಲಿ ಒಂದು ದೇವಸ್ಥಾನ, ಹೊರಗಡೆ ನಡೆದಾಡುವವರಿಗೆ ಸುಲಭ ದರ್ಶನ ನೀಡುವ ಆಪ್ತ ದೇವರು, ದೇವಸ್ಥಾನದ ಗೇಟಿನ ಪಕ್ಕ ಕರ್ಪೂರ, ಊದುಬತ್ತಿ, ಪುಸ್ತಕ ಮಾರುವ ಅಜ್ಜಿ.
ಅದರ ಎದುರಿಗೇ, ಬೀದಿಯ ಇನ್ನೊಂದು ಬದಿಯಲ್ಲಿ, ಆ ಮರದ ನೆರಳಿನಲ್ಲೇ ಇರುವ ಹಾಪ್ಕಾಂಸ್ ಅಂಗಡಿ. ಅಂಗಡಿಗೆ ಹೊಂದಿಕೊಂಡಿರುವ, ಅದರ ಹಿಂಬಾಗದಲ್ಲಿರುವ ಪಾರ್ಕು. ಅದರೊಳಗೆ ವಾಕಿಂಗು, ಕ್ರಿಕೆಟ್ಟು…ಒಟ್ಟಿನಲ್ಲಿ ದಣಿದ ಮನಸ್ಸನ್ನು ತಣಿಸಲು ಏನು ಬೇಕೋ ಎಲ್ಲವೂ ಇಲ್ಲಿ ಲಭ್ಯ.

ಸಾಲದೆಂಬಂತೆ, ಒಂದು ಚುರುಮುರಿ ಮಾರುವ ಗಾಡಿ ಬೇರೆ. ಮನಸ್ಸಿನಷ್ಟೇ ನಾಲಗೆ, ಹೊಟ್ಟೆಯನ್ನೂ ಆಹ್ಲಾದಗೊಳಿಸುವ ಅದರ ಓನರ್ ಹುಡುಗ. ಬಸವರಾಜ್ ಅಂತ ಅವನ ಹೆಸರು.

ಒಮ್ಮೆ ಹೀಗೇ ಒಂದು ಚುರುಮುರಿ ತಿನ್ನುತ್ತಾ, ಫೋನಿನಲ್ಲಿ ಒಂದು ಮೀಟಿಂಗ್ ಒಂದನ್ನು ಮುಗಿಸುತ್ತಾ ಅಲ್ಲೇ ಪಕ್ಕದ ಕಟ್ಟೆಯ ಮೇಲೆ ಕುಳಿತಿದ್ದೆ.ಆಗ ಒಂದು ಗಡಸು ಹೆಣ್ಣು ಧ್ವನಿಯೊಂದು, “ಯಾಕೋ ನನ್ ಮಗನೇ! ಇನ್ನೂ ಕೊಟ್ಟಿಲ್ಲ??” ಅಂತ ಅಂದಿದ್ದು ಕೇಳಿಸಿತು.

ತಲೆ ಎತ್ತಿ ನೋಡಿದರೆ, ದಢೂತಿ ಹಿರಿಯ ಹೆಂಗಸೊಬ್ಬರು, ಬಸವರಾಜನಿಗೆ ಅವಾಜ಼್ ಹಾಕುತ್ತಿದ್ದುದು ಕಂಡಿತು. ಅವನು ತಲೆ ಕೆರೆಯುತ್ತಾ “ನಾಳೆ ಕೊಡ್ತೀನಿ ಆಂಟಿ! ಬೇಲಾ? ಟಿಕ್ಕಿನಾ?” ಅಂತ ಕೇಳಿದ. ಆ ಮೇಡಮ್, “ಟಿಕ್ಕಿ ಹಾಕು! ಚೆನ್ನಾಗಿರ್ಲಿ!” ಅಂತ ಹೇಳಿ, ದೇವಸ್ಥಾನದ ಕಡೆಗೆ ನಡೆದರು.

ನಾನು ಏನಪ್ಪಾ ಈ ದೌರ್ಜನ್ಯ, ಹೀಗೆಲ್ಲಾ ಮಾಡಿಯೂ ದೇವರ ಹತ್ರ ಯಾವ್ ಮುಖ ಇಟ್ಕೊಂಡ್ ಹೋಗ್ತಾರೋ? ಇಂಥವರಿಗೆ ದೇವರು ಇನ್ನೇನು ತಾನೆ ಒಳ್ಳೇದು ಮಾಡಿಯಾನು ಅಂತ ಅಂದ್ಕೊಂಡು, ಆ ಹುಡುಗನ ಹತ್ತಿರ ಹೋಗಿ, “ವಾರಕ್ಕೊಂದ್ ಸಲಾನ? ತಿಂಗಳಿಗೊಂದ್ ಸಲಾನ?” ಅಂತ ಕೇಳಿದೆ. ಅವನು “ತಿಂಗಳಿಗೊಂದ್ ಸಲ ಸಾರ್! ಆ ಮೇಡಮ್ ಇಲ್ದಿದ್ದ್ರೆ ನಾನು ಒಂದ್ ನಯಾ ಪೈಸೆ ಉಳುಸ್ತಿರಲಿಲ್ಲ!” ಅಂದ. ನಾನು ಬಾಯ್ಬಿಟ್ಟೆ.

“ಅವರೇ ನನ್ನ ಕರಕೊಂಡ್ ಹಾಗಿ ಬ್ಯಾಂಕಲ್ಲಿ ಅಕೌಂಟ್ ಓಪನ್ ಮಾಡ್ಸಿ, ಈಗ ಪ್ರತೀ ತಿಂಗಳೂ ನನ್ನ್ ಹತ್ರ ದುಡ್ಡೂ ತಗೊಂಡ್ ಹೋಗಿ, ಅವರೇ ಕಟ್ಟಿ ಬರ್ತಾರೆ. ನನಗೆ sms ಬರತ್ತೆ. ನಾನ್ ಒಂದ್ ಸಲಾನೂ ಬ್ಯಾಂಕಿನ ಕಡೇನೂ ಹೋಗಿಲ್ಲ. RD, FD ಅಂತ ಎಲ್ಲಾ ಸ್ವಲ್ಪ ಸ್ವಲ್ಪ ಕೂಡಿ ಹಾಕ್ಸಿದ್ದಾರೆ. ತುಂಬಾ ಒಳ್ಳೆಯವರು ಸಾರ್! ಮಕ್ಕಳಿಲ್ಲ.” ಅಂತ ಹೇಳಿದ.

ಅಷ್ಟೊತ್ತಿಗೆ ಮೇಡಮ್ ದೇವಸ್ಥಾನದಿಂದ ಹೊರಗೆ ಬಂದರು. ಇವನು ಕಟ್ಟಿಟ್ಟ ಪೊಟ್ಟಣ ತಗೊಂಡು, ಇವನ ಕೈಗೆ 30 ರೂಪಾಯಿ ಇಟ್ಟು, “ನಾಳೆ ಹೋಗ್ತಿದೀನಿ, ನಾನೇ ಕಟ್ಟಿರ್ತೀನಿ. ಮುಂದಿನ ವಾರ ಬರ್ತೀನಿ. ಮರೀಬೇಡ. ಇದನ್ನೇ ಅಭ್ಯಾಸ ಮಾಡ್ಕೊಬೇಡ.” ಅಂತ ಹೇಳಿ. ಹೊರಟರು.

ನನ್ನ ದಣಿವು ಮಾಯವಾಯ್ತು. ಒಳ್ಳೆಯತನದ ಮೇಲಿನ ನಂಬಿಕೆ ಗಟ್ಟಿಯಾಯ್ತು. ಮನೆಯ ಕಡೆಗಿನ ಹೆಜ್ಜೆ ಹಗುರವಾಯ್ತು. ಸಂಜೆ ಧನ್ಯವಾಯ್ತು. ಹಲಸಿನಹಣ್ಣಿನ ನೆನಪಾಯ್ತು.